ಮಕ್ಕಳು ಮತ್ತು ಪುಸ್ತಕಗಳು

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲

 

ಮಕ್ಕಳು ಮತ್ತು ಪುಸ್ತಕಗಳು

ನೀಲಿಮೆ ಹೀಗೆ ನಮಗೆಲ್ಲರಿಗೂ ಬೆಳಕು ಕೊಡುವ ಚಂದ್ರ ಆದಳು ನೋಡಿ ನಾನು ಓದುತ್ತಿದ್ದ ಕಥೆಯ ಕೊನೆಯ ವಾಕ್ಯವನ್ನು ಮುಗಿಸುತ್ತಾ ತಲೆಯೆತ್ತಿದೆ. ಕೆಲವು ಮಕ್ಕಳಂತೂ ಕಣ್ಣಗಲಿಸಿ, ಕಿವಿಯರಳಿಸಿ ಕಥೆಯಲ್ಲಿ ತಲ್ಲೀನರಾಗಿದ್ದರು. ಕೆಲವರ ಮುಖಗಳನ್ನು ನೋಡುವಾಗ ಇವರಿಗೆ ಕಥೆ ಅರ್ಥವಾಗಿದೆಯೇ ಎಂದು ಸಂಶಯವಾಗುವಂತಿತ್ತು. ಕೆಲವರು ಇದಾವುದರ ಪರಿವೆಯೇ ಇಲ್ಲದೆ ಪರಸ್ಪರ ಹರಟೆ ಹೊಡೆಯುತ್ತಿದ್ದರು. ಕಥೆ ಮುಗಿದ ತಕ್ಷಣವೇ ಗಲಾಟೆ ಗದ್ದಲ..... ಕೆಲವು ಮಕ್ಕಳು ನನ್ನ ಮೇಲೆ ಮುಗಿಬಿದ್ದು ಅಕ್ಕಾ ಇನ್ನೊಂದು ಕಥೆ ಎಂದು ಚೀರುತ್ತಿದ್ದರು. ಇನ್ನೊಂದು ಕಡೆ ಕೋಣೆಯಿಡೀ ಅಡ್ಡಾಡುತ್ತಿರುವ ಒಂದು ತುಂಟ ಮಕ್ಕಳ ಗುಂಪಿತ್ತು. ಆ ಕ್ಷಣಕ್ಕೆ ಅನಿಸಿತು ನನಗೆ ಮಕ್ಕಳೊಂದಿಗೆ ಒಡನಾಡುವುದು ಎಷ್ಟು ಹಿತವಾದ ಮುದ್ದಾದ ಪ್ರಕ್ರಿಯೆ ಆದರೆ ಅವರೊಂದಿಗೆ ಯಾವುದಾದರೊಂದು ನಿಗದಿತ ವಿಚಾರವನ್ನಿಟ್ಟುಕೊಂಡು ವ್ಯವಹರಿಸುವುದು ಒಂದು ಸವಾಲೇ ಸರಿ.....ಎಂದು ಈ ಹಿಂದೆ ಅದೆಷ್ಟೋ ಬಾರಿ 10-11 ವರುಷದ ಕೆಳಗಿನ ಮಕ್ಕಳೊಡನೆ ಒಡನಾಡಿ ಸಂತೋಷ ಪಟ್ಟಿದ್ದೇನೆ. ಈ ಒಡನಾಟಗಳ ಮೂಲಕ ಹೊಸ ವಿಚಾರ ಕಲಿತದ್ದೂ ಇದೆ. ಆದರೆ, ಇತ್ತೀಚೆಗಷ್ಟೇ ಮಾಗಡಿಯ ಹತ್ತಿರದ ವರದೇನಹಳ್ಳಿಯ ಪ್ರಾಥಮಿಕ ಶಾಲೆಯ ಎಂಟು ಹತ್ತು ದಿನಗಳ ನನ್ನ ಒಡನಾಟ ಎಂದಿಗಿಂತ ವಿಭಿನ್ನವಾದ ಅನುಭವವಾಗಿತ್ತು. ಹೊಸ ಕಲಿಕೆಗೆ, ವಿಚಾರಗಳ ಯೋಚನೆಗೆ ಅವಕಾಶ ನೀಡಿತು.

 ಎಂದಿನಂತೆ ನನ್ನೊಂದಿಗೆ ಹಲವಾರು ಮಂದಿಯಿರಲಿಲ್ಲ, ನಾನೊಬ್ಬಳೇ ಕೆಲವು ಹಿರಿಯ ಸ್ನೇಹಿತರ ಸಲಹೆಗಳನ್ನಿಟ್ಟುಕೊಂಡು ಶಾಲಾ ಸನ್ನಿವೇಶದಲ್ಲೇ ಮಕ್ಕಳನ್ನು ನಿಭಾಯಿಸಬೇಕಿತ್ತು. ನನ್ನ ಒಡನಾಟ ಯಾವುದೋ ಒಂದು ದಿನದ ಒಂದೋ ಎರಡೋ ತಾಸುಗಳಾಗಿರಲಿಲ್ಲ. 8-10 ದಿನಗಳ ಕಾಲ ಮಕ್ಕಳೊಂದಿಗೆ ಸತತ ಕೆಲಸ ಮಾಡಲಿರುತ್ತಿತ್ತು. ಅದೂ ಒಂದು ಚೌಕಟ್ಟಿನೊಳಗೆ ಮಕ್ಕಳನ್ನು ಪುಸ್ತಕಗಳೊಂದಿಗೆ ಒಡನಾಡಿಸುವುದು ಹೇಗೆ ? ಪುಸ್ತಕಗಳೊಂದಿಗೆ ನಂಟನ್ನು ಬೆಳೆಸುವುದು ಹೇಗೆ ? ಇವೇ ಪ್ರಶ್ನೆಗಳನ್ನು ಮನಸಿನಲ್ಲಿಟ್ಟುಕೊಂಡು ಏನೇನು ಮಾಡಬಹುದೆಂದು ಯೋಚಿಸುತ್ತಿದ್ದೆ.

  ಮೊದಲೆರಡು ದಿನ ನನ್ನ ಒಡನಾಟ ಅವರೊಡನೆ ನೀರಸವಾಗದಿರಲು ಹಾಗೂ ಅವರೊಡನೆ ಒಂದು ಸರಳ ರೀತಿಯ ಸಂಬಂಧ ಬೆಳೆಸಲು ಒಂದೆರಡು ಕಥೆಗಳನ್ನು ಓದಿದೆ. ಸುಮ್ಮನೆ ತೆರೆದ ಪ್ರಶ್ನೆಗಳನ್ನಿಟ್ಟುಕೊಂಡು ಮಾತನಾಡಿಸಿದೆ. ಗ್ರಂಥಾಲಯ, ಪುಸ್ತಕಗಳ ಬಗ್ಗೆ ಅವರಿಗನಿಸಿದ್ದನ್ನು ಹೇಳಲು ಹೇಳಿದೆ. ಪ್ರತಿ ಮಗುವಿನ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಆದರೆ ಎಲ್ಲರೂ ಒಂದು ಹೊಸ ವ್ಯಕ್ತಿಯೊಂದಿಗೆ ವ್ಯವಹರಿಸಲು, ಕಲಿಯಲು ಉತ್ಸುಕರಾಗಿದ್ದರು. ಒಂದು ಪುಸ್ತಕವನ್ನು ಎರಡು ಹುಡುಗಿಯರ ಕೈಲಿಟ್ಟು ಮಾರನೇ ದಿನ ಆ ಪುಸ್ತಕದ ಒಂದು ಸಣ್ಣ ಪರಿಚಯವನ್ನು ಮಾಡಲು ತಯಾರಿ ಮಾಡಿಕೊಂಡು ಬರುವಂತೆ ಹೇಳಿದೆ. ಹೇಗೆ ಯಾವ ರೀತಿ ಪರಿಚಯವನ್ನು ಮಾಡಬೇಕು ಎಂಬುದನ್ನು ವಿವರಿಸಿದೆ.

 ಆದರೆ ಮಾರನೇ ದಿನ ಪುಸ್ತಕ ಪರಿಚಯ, ಪುಸ್ತಕದ ಬಗ್ಗೆ ಮಾತಾಡುವುದು ಇನ್ನೂ ಈ ಮಕ್ಕಳಿಗೆ ಅರಿಯದ, ಅರ್ಥವಾಗದ ವಿಚಾರಗಳು ಎಂಬುದು ನನಗೆ ತಿಳಿಯಿತು. ಇಡೀ ಕತೆಯನ್ನೇ ಹೇಳುತ್ತಾ ಹೋದರು. ಆಗ ಪ್ರಶ್ನಿಸಿದೆ- ನೀನು ಕತೆ ಹೇಳುತ್ತಾ ಹೋದರೆ ಆ ಕತೆಯನ್ನು ಕೇಳಿದವರು ಮತ್ಯಾಕೆ ಈ ಪುಸ್ತಕ ಓದುತ್ತಾರೆ ? ಬೇರೆಯವರನ್ನು ಒಂದು ಪುಸ್ತಕ ಓದುವಂತೆ ಮಾಡಲು ನಾವೇನು ಮಾಡಬೇಕು ? ಮಕ್ಕಳಿಗೆ ಇನ್ನೂ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಭಕ್ತಿಯಿಂದ ಕೇಳುತ್ತಿದ್ದರು. ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಹೀಗೆ ಒಂದು ಸಣ್ಣ ಪುಸ್ತಕದ ಪರಿಚಯ ಮಾಡಿದೆ.

  ಈ ಎರಡು ದಿನಗಳ ನಂತರ ಪುಸ್ತಕಗಳ ಅಭಿರುಚಿ ಹಿಡಿಸುವಂತಹ, ಅಥವಾ ಮೊದಲಿಗೆ ಪುಸ್ತಕಗಳ ಹತ್ತಿರ ತರುವಂತಹ ಒಂದೆರಡು ಚಟುವಟಿಕೆಗಳನ್ನು ಯೋಚಿಸಲಾರಂಭಿಸಿದೆ. ಇದೇ ನಿಟ್ಟಿನಲ್ಲಿ ಕೇಳಿದೆ, ಪುಸ್ತಕಗಳೆಂದರೆ ನಮಗಿಷ್ಟವೇ?...... ಹೌದು ಎಂದು ಒಕ್ಕೊರಲಿನಿಂದ ಕಿರುಚಿದರು. ನಮಗೆ ಅಕ್ಷರ ಫೌಂಡೇಷನ್ರವರು ಒಂದಿಷ್ಟು ಪುಸ್ತಕಗಳನ್ನಿತ್ತಿದ್ದಾರೆ, ಹೇಗನಿಸುತ್ತೆ? ತುಂಬಾ ಖುಷಿಯೆಂದು ರಾಗದಲ್ಲಿ ಬಂತು ಉತ್ತರ. ಎಷ್ಟು ಪುಸ್ತಕಗಳಿವೆ?....

ಮೌನ.. ನೀವೆಷ್ಟು ಪುಸ್ತಕಗಳನ್ನೋದಿರುವಿರಿ? ಒಂದೋ ಎರಡೋ ಎಂಬಂತೆ ಉತ್ತರಗಳು ಒಂದೋ ಎರಡೋ ಮೂಲೆಗಳಿಂದ ಬಂದವು. ಹೀಗೇ ಅರಿವಾಯಿತು, ಇವರ ಪ್ರಯಾಣ ಪುಸ್ತಕಗಳೊಂದಿಗೆ ಇನ್ನೂ ಆರಂಭವಾಗಿರಲಿಲ್ಲ ಎಂಬುದು. ಪುಸ್ತಕಗಳೊಡನೆ ಅವರ ಗೆಳೆತನ ಇನ್ನೂ ಶುರುವಾಗಿರಲಿಲ್ಲ. ಇರಲಿ, ಈ ಪ್ರಶ್ನೆಗಳಿಂದಲೇ ಪ್ರಾರಂಭವಾಗಲಿ ಈ ಹೊಸ ಗೆಳೆತನ ಎಂದುಕೊಂಡು ಚಿಕ್ಕ ಗುಂಪುಗಳನ್ನು ಮಾಡಿ ಒಂದೊಂದು ಅಟ್ಟಿ ಪುಸ್ತಕಗಳನ್ನು ಇಟ್ಟು ಎಣಿಸಲು ಹೇಳಿದೆ. ಮಕ್ಕಳೆಲ್ಲಾ ಒಟ್ಟಾಗಿ ಎಣಿಸಿ ಸಂಭ್ರಮಿಸಿದರು.

ಸುಮಾರು 100-150 ಪುಸ್ತಕಗಳು.... ಪುಸ್ತಕಗಳಿಗೆಲ್ಲಾ ಹಳದಿ, ಕೆಂಪು, ನೀಲಿ, ಹಸಿರಿನ ಲೇಬಲ್ಗಳನ್ನು ಅಂಟಿಸಲಾಗಿತ್ತು. ಯಾಕಾಗಿ ಅಂಟಿಸಿರಬಹುದು? ಮಕ್ಕಳಿಗೆ ತಿಳಿದಿರಲಿಲ್ಲ. ಅಧ್ಯಾಪಕರಿಗೂ ಸರಿಯಾದ ಅರಿವಿರಲಿಲ್ಲ. ಆಯಾ ಮಟ್ಟಕ್ಕೆ ಸರಿಯಾಗಿ ವಿಂಗಡಿಸಿರಬಹುದು ಎಂದೆನಿಸಿತು..... ಆದರೆ, ಪುಸ್ತಕಗಳ ಹೆಚ್ಚು ಪರಿಚಯವೇ ಇಲ್ಲದ ಮಕ್ಕಳಿಗೆ ಈ ರೀತಿ ತರಗತಿ ಅಥವಾ ವಯಸ್ಸಿಗನುಗುಣವಾಗಿ ಪುಸ್ತಕ ವಿಂಗಡಿಸುವುದು ಸರಿಯೆನಿಸಲಿಲ್ಲ. ಅವರೆಲ್ಲರೂ ಎಲ್ಲಾ ರೀತಿಯ ಪುಸ್ತಕಗಳನ್ನು ಓದಲು ಉತ್ಸುಕರಾಗಿದ್ದರು, ಪುಸ್ತಕಗಳನ್ನು ಅವರಿಗನುಗುಣವಾಗಿ, ಅವರಿಗರ್ಥವಾಗುವಂತೆ ವಿಂಗಡಿಸುವುದು, ಇನ್ನೊಂದು ಚಟುವಟಿಕೆ-ಈ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ತುಂಬಾ ಅಗತ್ಯವೆಂದು ಎನಿಸಿತು. ಅವರಲ್ಲೇ ಮೂರು ವಿಭಾಗಗಳನ್ನು ಯೋಚಿಸಲು ಹೇಳಿದೆ. ಮೊದಲ ಮೌನ ಮತ್ತು ಸ್ವಲ್ಪ ಸಹಾಯದ ನಂತರ ಒಟ್ಟಾಗಿ ಮೂರು ವಿಭಾಗಗಳನ್ನು ಮಾಡಿದೆವು - ಕನ್ನಡ ಕತೆ ಪುಸ್ತಕಗಳು, ಇಂಗ್ಲೀಷ್ ಕತೆ ಪುಸ್ತಕಗಳು ಹಾಗೂ ಮಾಹಿತಿ ಪುಸ್ತಕಗಳು. ಈ ಮೂರೂ ವಿಭಾಗಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟೆವು ಹಾಗೂ ಮಕ್ಕಳೇ ಇವುಗಳಿಗಾಗಿ ಸೊಗಸಾದ ಲೇಬಲ್ಗಳನ್ನು ತಯಾರಿಸಿದರು. ಮಕ್ಕಳು ಅದ್ಭುತವಾಗಿ ಸಹಕರಿಸುತ್ತಿದ್ದರು. ಸಂತೋಷಪಡುತ್ತಿದ್ದರು. ಈ ಚಟುವಟಿಕೆಯ ನಂತರ ಮಕ್ಕಳಲ್ಲೇ ಪುಸ್ತಕಗಳನ್ನು ಆಯ್ಕೆ ಮಾಡಲು ಹೇಳಿ ಅವರಲ್ಲಿ ಓದಿಕೊಂಡು ಬರಲು ಹೇಳಿದೆ.ಮರುದಿವಸ ನಾನು ನಿರೀಕ್ಷಿಸಿದಂತೆ ಬರೀ ಒಂದೆರಡು ಮಕ್ಕಳು ಓದಿಕೊಂಡು ಬಂದಿದ್ದರು. ಸ್ವಲ್ಪ ಬೈದು ಬೇಸರ ಅಸಮಧಾನ ವ್ಯಕ್ತಪಡಿಸಿದ ನಂತರ ಮಕ್ಕಳಿಗೆ ತರಗತಿಯಲ್ಲೇ ಗುಂಪಾಗಿ ಅವರಿಗಿಷ್ಟವಾದ ಪುಸ್ತಕವನ್ನು ಓದಿಕೊಳ್ಳಲು ಹೇಳಿದೆ. ನಂತರ, ಕಾರ್ಡ್ ಬೋರ್ಡ್ ಶೀಟ್ಗಳನ್ನಿತ್ತು ಅವರು ಓದಿದ ಪುಸ್ತಕಗಳನ್ನು ಬೇರೆಯವರೂ ಓದಲು ಪ್ರೇರೇಪಿಸುವಂತಹ ಭಿತ್ತಿಚಿತ್ರಗಳನ್ನು ತಯಾರಿಸಲು ಹೇಳಿದೆ. ಅವರ ಕಲ್ಪನೆಗಳಿಗೆ ಒತ್ತು ನೀಡಲು ಯಾವುದೇ ಪುಸ್ತಕದಿಂದ ಕಾಪಿ ಹೊಡೆಯಬಾರದೆಂದು ಕೇಳಿಕೊಂಡೆ. ಕೆಲವೇ ಗಂಟೆಗಳಲ್ಲಿ ತಯಾರಾದವು ಮೂರು ಭಿತ್ತಿಚಿತ್ರಪಟಗಳು, ಭಿತ್ತಿಪಟಗಳು ಸರಳವಾಗಿದ್ದವು, ಮುದ್ದಾಗಿದ್ದವು, ಪುಸ್ತಕದ ಬಗ್ಗೆ ಕೆಲವೇ ಕೆಲವು ಪ್ರಮುಖ ಅಂಶಗಳನ್ನು ನೀಡುತ್ತಿದ್ದವು ಅದಲ್ಲಕ್ಕಿಂತ ಮಿಗಿಲಾಗಿ ಈ ಪ್ರಕ್ರಿಯೆ ಮಕ್ಕಳನ್ನು ಹೊಸದಾಗಿ ಯೋಚಿಸುವಂತೆ ಮಾಡಿತ್ತು. ಕೊನೆಯ ದಿನ ಮಕ್ಕಳು ಥಾಂಕ್ಯೂ ಕಾರ್ಡ್ ಧನ್ಯವಾದ ಕಾರ್ಡ್ಗಳನ್ನು ಮಾಡಿದರು. ಅವರು ಪರಸ್ಪರ ಚಚರ್ಿಸುವುದು, ಕಾರ್ಡ್ಗಳನ್ನು ಯಾರಿಗೆ ಕೊಡಬಹುದೆಂದು ಯೋಚಿಸುವುದು ನೋಡುವಾಗ ಖುಷಿಯಾಗುತ್ತಿತ್ತು. ನಮ್ಮ ಮೊದಲ ದಿನದ ಒಡನಾಟಕ್ಕೂ, ಕೊನೆಯ ದಿನದ ಒಡನಾಟಕ್ಕೂ ವ್ಯತ್ಯಾಸವಿತ್ತು.....

ಈ ಚಟುವಟಿಕೆಗಳಿಂದ, ಎಲ್ಲಾ ಮಕ್ಕಳೂ ದೊಡ್ಡ ಓದುಗಾರರಾಗುತ್ತಾರೆಂಬ ಭ್ರಮೆ ನನಗೆ ಖಂಡಿತವಾಗಿಯೂ ಇಲ್ಲ. ಕೆಲವರು ಇದೇ ಚಟುವಟಿಕೆಗಳಿಂದ ಪ್ರೇರೇಪಿತರಾಗಿ ಈಗಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು, ಕೆಲವರು ಸ್ವಲ್ಪ ದೊಡ್ಡವರಾದ ಮೇಲೆ ಇನ್ನಾವುದೋ ಕಾರಣಗಳಿಂದಾಗಿ ಪ್ರಾರಂಭಿಸಬಹುದು. ಇನ್ನು ಹಲವರಿಗೆ ಪುಸ್ತಕಗಳೊಂದಿಗೆ ಎಂದೂ ಗೆಳೆತನವಾಗದ ಸಾಧ್ಯತೆಯಿದೆ. ಈ ನನ್ನ ಹತ್ತು ದಿನಗಳ ಒಡನಾಟದ ಫಲಿತಾಂಶ ಏನೇ ಇರಲಿ...... ಪ್ರಕ್ರಿಯೆ ನನಗೆ ಖುಷಿ ತಂದಿದೆ, ಹೊಸ ವಿಚಾರಗಳನ್ನು ಕಲಿಸಿದೆ, ಒಂದು ಒಳ್ಳೇ ಬೆಳವಣಿಗೆಯತ್ತ ಕೆಲಸ ಮಾಡಲು ಅವಕಾಶ ನೀಡಿದೆ.

 ನಾನು ಪುಸ್ತಕಗಳೊಂದಿಗಿರುವ ನನ್ನ ಸಂಬಂಧವನ್ನು ಸಂಭ್ರಮಿಸುತ್ತೇನೆ.. ಇದೇ ಸಂಭ್ರಮ ಸಡಗರವನ್ನು ಇನ್ನೊಬ್ಬರಿಗೆ ಪರಿಚಯಿಸುವುದು, (ಅದೂ ಎಳೇ ಮನಸ್ಸುಗಳಿಗೆ) ಇನ್ನಷ್ಟು ಸಂಭ್ರಮ, ತೃಪ್ತಿ ತರುವ ಪ್ರಕ್ರಿಯೆಯಾಗಿದೆ

Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment